16 ಮಂದಿ ಬಾಡಿಗೆದಾರರಿಗೆ ವಂಚನೆ: ಮಹಿಳೆ ಬಂಧನ ಆರೋಪಿತ ಮಹಿಳೆ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಗೃಹ ಸಾಲ ಪಡೆದುಕೊಂಡಿದ್ದರು. ಆದರೆ, ಸಾಲ ತೀರಿಸದ ಹಿನ್ನೆಲೆಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಅಪಾರ್ಟ್‌ಮೆಂಟ್‌ ವಶಕ್ಕೆ ಪಡೆಯಲು ಬಂದಾಗ ವಂಚನೆಗೊಳಗಾಗಿರುವುದು ಭೋಗ್ಯದಾರರಿಗೆ ಗೊತ್ತಾಗಿದೆ. ಬೆಂಗಳೂರು: ಒಂದೇ ಕಟ್ಟಡದಲ್ಲಿ ವಾಸವಾಗಿದ್ದ 16 ಮಂದಿ ಮನೆ ಭೋಗ್ಯದಾರರಿಗೆ ಸುಮಾರು 1 ಕೋಟಿ ರೂ. ವಂಚಿಸಿದ ಆರೋಪದಡಿ ಮನೆ ಮಾಲೀಕಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.ಗಂಗೊಂಡನಹಳ್ಳಿ ನಿವಾಸಿ ಸುಧಾ(45) ಬಂಧಿತೆ. ಆಕೆಯ ವಿರುದ್ಧ ಮೊಹಮ್ಮದ್‌ ನಹೀಂ ಸೇರಿ 16 ಮಂದಿ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿತ ಮಹಿಳೆ ಸುಧಾ ಗಂಗೊಂಡನಹಳ್ಳಿಯ ಎಸ್‌.ಎನ್‌. ಲುಮಿನೋಸ್‌ ಅಪಾರ್ಟ್‌ ಮೆಂಟ್‌ ನಿರ್ಮಿಸಿದ್ದಾರೆ. 5 ಮಹಡಿಗಳಿರುವ ಅಪಾರ್ಟ್‌ಮೆಂಟ್‌ನಲ್ಲಿ 16 ಮನೆಗಳನ್ನು ಭೋಗ್ಯಕ್ಕೆ ನೀಡಿದ್ದರು.ಕಳೆದ ಜುಲೈ 11ರಂದು ಆರೋಪಿತ ಮಹಿಳೆ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿ ಗೃಹ ಸಾಲ ಪಡೆದುಕೊಂಡಿದ್ದರು. ಆದರೆ, ಸಾಲ ತೀರಿಸದ ಹಿನ್ನೆಲೆಯಲ್ಲಿ ಬ್ಯಾಂಕ್‌ ಅಧಿಕಾರಿಗಳು ಅಪಾರ್ಟ್‌ಮೆಂಟ್‌ ವಶಕ್ಕೆ ಪಡೆಯಲು ಬಂದಾಗ ವಂಚನೆಗೊಳಗಾಗಿರುವುದು ಭೋಗ್ಯದಾರರಿಗೆ ಗೊತ್ತಾಗಿದೆ.ಇದೀಗ ಭೋಗ್ಯದಾರರು ಲೀಸ್‌ಗೆ ನೀಡಿದ ಹಣವೂ ಇಲ್ಲದೇ, ಇದ್ದ ಮನೆಯಲ್ಲಿಯೂ ಇರಲಾರದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. 16 ಮಂದಿ ಭೋಗ್ಯದಾರರಿಂದ ಹಣ ಪಡೆದಿರುವುದಲ್ಲದೇ, ಸಾಲದ ವಿಚಾರವಾಗಿ ಬ್ಯಾಂಕ್‌ನಿಂದ ನೋಟಿಸ್‌ ಬಂದಿರುವುದನ್ನು ತಿಳಿಸದೇ ವಂಚಿಸಲಾಗಿದೆ. ವಿಚಾರ ಗೊತ್ತಾಗಿ ಹಣ ಹಿಂತಿರುಗಿಸುವಂತೆ ಕೇಳಿದರೆ ಅಶ್ಲೀಲವಾಗಿ ನಿಂದಿಸಿ, ನಮ್ಮನ್ನು ರೌಡಿಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಸಿ ನಂಬಿಕೆದ್ರೋಹವೆಸಗಿದ್ದಾರೆ ಎಂದು ದೂರಿನಲ್ಲಿ ಭೋಗ್ಯದಾರರು ಆರೋಪಿಸಿದ್ದಾರೆ.